ಬ್ಯಾಂಟಿ ರೋಗ
	1882ರ ಸುಮಾರಿಗೆ ಬ್ಯಾಂಟಿ ಎಂಬ ವೈದ್ಯ ವಿಶಿಷ್ಟವಾದುದೆಂದು ಗುರುತಿಸಿ ವಿವರಿಸಿದ ರೊಗ. ಹೆಪಟೊಸ್ಪ್ಲೀನೊಮೆಗಲಿ ಪರ್ಯಾಯ ನಾಮ. ಅವನ ವಿವರಣೆಯೆಂತೆ ಈ ರೋಗದಲ್ಲಿ ಗುಲ್ಮ (ಸ್ಪ್ಲೀನ್) ಅವ್ಯಕ್ತ ಕಾರಣಗಳಿಂದ ವೃದ್ಧಿ ಆಗುತ್ತದೆ. ರೋಗದ ತಾರುಣ್ಯದಲ್ಲಿಯೇ ರಕ್ತ ಕಣಗಳ ಹಾಗೂ ರಕ್ತದ ಶ್ವೇತ ಕಣಗಳ (ವಾಸ್ತವವಾಗಿ ವರ್ಣರಹಿತ ಕಣಗಳು ಎನ್ನಬೇಕು) ಸಂಖ್ಯೆ ಕಡಿಮೆ ಆಗುತ್ತದೆ. ನಿಶ್ಶಕ್ತಿ ಮತ್ತು ಆಗಿಂದಾಗ ರಕ್ತಸ್ರಾವಗಳೂ ಈ ಹಂತದಲ್ಲಿ ಸಾಮಾನ್ಯ. ರೋಗ ಮುಂದುವರಿದಂತೆ ಯಕೃತ್ತಿನ ವೃದ್ಧಿ, ಜಠರದಲ್ಲಿ ಪದೇ ಪದೇ ರಕ್ತಸ್ರಾವ ಮತ್ತು ಮೂತ್ರದಲ್ಲಿ ವರ್ಣದ್ರವ್ಯ ವೃದ್ಧಿ ಕಂಡುಬಂದು ಕೊನೆಗೆ ಯಕೃತ್ತಿನ ಕೃಶ್ಯತೆ ಮತ್ತು ಜಲೋದರಗಳಿಂದ ಮರಣ ಸಂಭವಿಸುತ್ತದೆ. ಬ್ಯಾಂಟಿಯ ಅಭಿಪ್ರಾಯದಂತೆ ಗುಲ್ಮದಲ್ಲಿ ತೋರಿ ಬರುವ ರೋಗವಿಕಾರವೇ (ಲೀಷನ್) ಮೂಲಲಕ್ಷಣ, ಮತ್ತು ರೋಗದ ಮುಂದಿನ ಎಲ್ಲ ಹಂತಗಳಿಗೂ ಕಾರಣ. ಅದೇ ಯಕೃತ್ತಿನ ವೃದ್ಧಿಗೆ ಕೂಡ ಕಾರಣವಾಗಿ ಮುಂದೆ ಮಾರಕವಾಗುವುದರಿಂದ ಇದಕ್ಕೆ ಯಕೃತ್ ಗುಲ್ಮವೃದ್ಧಿ (ಹೆಪಟೊಸ್ಟ್ಲೀನೊಮೆಗಲಿ)-ಒಂದು ಮಾರಕಸ್ಥಿತಿ-ಎಂದು ಕರೆಯುವುದು ಯುಕ್ತ ಎಂದು ಬ್ಯಾಂಟಿಯ ಅಭಿಪ್ರಾಯ. ಗುಲ್ಮ ವೃದ್ಧಿಯಾದಾಗಲೇ ಶಸ್ತ್ರಕ್ರಿಯೆಯಿಂದ ಗುಲ್ಮವನ್ನು ತೆಗೆದುಹಾಕಿದರೆ ಅನೇಕ ವೇಳೆ ಈ ರೋಗ ವಾಸಿ ಆಗುವುದು ಬ್ಯಾಂಟಿಯ ಅಭಿಪ್ರಾಯಕ್ಕೆ ಮನ್ನಣೆ ಎನಿಸಬಹುದು. ಆದರೆ ಗುಲ್ಮ ನಿರ್ಮೂಲನದಿಂದ ರಕ್ತಕಣಛಿದ್ರಕೃತ ಕಾಮಾಲೆ (ಹಿಮೊಲೆಟಿಕ್ ಜಾಂಡೀಸ್), ಚರ್ಮದ ಅಡಿ ಅಲ್ಲಲ್ಲಿ ರಕ್ತಸ್ರಾವದಿಂದಾಗಿ ನೀಲಿಗಟ್ಟುವಿಕೆ (ಥ್ರೌಂಬೊಸೈಟೊಪೀನಿಕ್ ಪಪ್ರ್ಯುರ) ಇವೂ ಅನೇಕ ಸಂದರ್ಭಗಳಲ್ಲಿ ವಾಸಿ ಆಗುತ್ತವೆ. ಆದ್ದರಿಂದ ಅವ್ಯಕ್ತ ಕಾರಣಗಳಿಂದಾಗಿ ಮೊದಲು ಗುಲ್ಮ ರೋಗಪೀಡಿತವಾಗಿ ತತ್ಫಲವಾಗಿ ಬ್ಯಾಂಟಿ ರೋಗ ಕಂಡುಬರುತ್ತದೆ ಎಂದು ಹೇಳಲಾಗುವುದಿಲ್ಲ. ಅಲ್ಲದೆ ರೋಗ ಎಲ್ಲರಲ್ಲೂ ಯಾವಾಗಲೂ ಬ್ಯಾಂಟಿ ವಿವರಿಸಿರುವಂತೆಯೇ ಇರುವುದಿಲ್ಲ. ವಾಸ್ತವವಾಗಿ ವ್ಯಕ್ತವಾದ ಕಾರಣಗಳಿಂದಲೇ ಈ ರೋಗ ಲಕ್ಷ್ಷಣಗಳು ಕಂಡುಬರಬಹುದು. ಆದ್ದರಿಂದ ಬ್ಯಾಂಟಿ ರೋಗ  ಎಂಬ ಒಂದು ರೋಗಸ್ಥಿತಿ ಇದೆ ಎನ್ನುವುದಾಗಲಿ ವಿವಿಧ ಕಾರಣಗಳಿಂದ ಉದ್ಭವಿಸುವ ಒಂದು ಸಾಮಾನ್ಯ ಲಕ್ಷಣಕೂಟ (ಸಿಂಡ್ರೋಮ್) ಎಂದಾಗಲಿ ವ್ಯವಹರಿಸುವುದು ಸಮಂಜಸವೆನಿಸದು.

	ಪೋರ್ಟಲ್ ಅಭಿಧಮನಿ ಮತ್ತು ಅದರ ಕಾಲುವೆಗಳಲ್ಲಿ ಕಾರಣಾಂತರಗಳಿಂದ ರಕ್ತದ ಒತ್ತಡ ಹೆಚ್ಚುವುದರಿಂದ ಬ್ಯಾಂಟಿ ವಿವರಿಸಿರುವ ಕೆಲವು ಅಥವಾ ಎಲ್ಲ ಲಕ್ಷಣಗಳೂ ಕಂಡುಬರುವವೆಂದು ಪ್ರಾಣಿಗಳಲ್ಲಿ ಪ್ರಾಯೋಗಿಕವಾಗಿ ತೋರಿಸಲ್ಪಟ್ಟಿದೆ. ಪೋರ್ಟಲ್ ಅಭಿಧಮನಿ ರಕ್ತವನ್ನು ಜಠರ, ಕರುಳು ಮತ್ತು ಗುಲ್ಮಗಳಿಂದ ಯಕೃತ್ತಿಗೆ ಒಯ್ಯುತ್ತದೆ. ಯಕೃತ್ತಿನಲ್ಲಿ ಕಾರಣಾಂತರಗಳಿಂದ ರೋಗ ವಿಕಾರವಾಗಿ ಅದರ ತಂತುಕೀಕರಣವಾದರೆ (ಸಿರ್ಹೋಸಿಸ್ ಫೈಬ್ರೋಸಿಸ್) ಆದರಿಂದ ಪೋರ್ಟಲ್ ಅಭಿಧಮನಿಯ ಮೇಲೂ ಯಕೃತ್ತಿನೊಳಗೆ ಅದರ ಕವಲುಗಳ ಮೇಲೂ ಹೊರಗಿನಿಂದ ಅದುಮಿದಂತಾಗಿ ಅವುಗಳಲ್ಲಿ ರಕ್ತದ ಒತ್ತಡ ಏರುತ್ತದೆ. ಆದ್ದರಿಂದ ಬ್ಯಾಂಟಿರೋಗದಲ್ಲಿಲ್ಲದ ಲಕ್ಷಣಗಳಿಗೆ ಪೋರ್ಟಲ್ ಸಿರ್ಹೋಸಿಸ್ ಕಾರಣವಿರಬೇಕು ಎನ್ನಿಸಿತು. ಆದರೆ ರೋಗಕಾಲದಲ್ಲಿ ಪೋರ್ಟಲ್ ಅಭಿಧಮನಿಗಳು ಕಿರಿದಾಗಿ ಹೋದದ್ದು ಕಂಡುಬಂದರೂ ಯಕೃತ್ತಿನ ತಂತುಕೀಕರಣ ಆಗಿರುವುದಿಲ್ಲ. ಬಹುಶಃ ಬೇರೆ ಕಾರಣಗಳಿಂದ ಪೋರ್ಟಲ್ ಅಭಿಧಮನಿ ಮತ್ತು ಕವಲುಗಳು ಹೊರಗಿನಿಂದ ಅದುಮಲ್ಪಟ್ಟು ಕಿರಿದಾಗಿ ಹೋಗಿರಬಹುದು. ಶಿಷ್ಟೊಸೋಮಿಯಾಸಿಸ್ ಎಂಬ ರೋಗದಲ್ಲಿ ಸಿಷ್ಟೊಸೋಮಿಯ ಎಂಬ ಪರೋಪಜೀವಿ ಯಕೃತ್ತಿನಲ್ಲಿ ಅಧಿಕÀವಾಗಿ ಶೇಖರಗೊಂಡು ಅಲ್ಲಿ ರೋಗವಿಕಾರ ಉಂಟುಮಾಡುವುದರಿಂದ ಪೋರ್ಟಲ್ ಅಭಿಧಮನಿಯಲ್ಲಿ ರಕ್ತ ಪ್ರವಾಹಕ್ಕೆ ಅಡ್ಡಿಯಾಗಬಹುದು. ಅಂತೂ ಪೋರ್ಟಲ್ ಅಭಿಧಮನಿಕಿರಿದಾಗಿ ಹೋಗಿರುವುದರಿಂದಾಗಲೀ ಸಿಷ್ಟೊಸೋಮಿಯಾಸಿಸ್ಸಿನಲ್ಲಿಯಂತೆ ರೋಗ ವಿಕಾರಕ್ಕೆ ಈಡಾಗಿರುವುದರಿಂದಾಗಲಿ ಅದರಲ್ಲಿ ರಕ್ತಪ್ರವಾಹಕ್ಕೆ ಅಡ್ಡಿ ಕಂಡುಬಂದರೆ ಸ್ವಾಭಾವಿಕವಾಗಿಯೆ ರಕ್ತ ಹಿಂದೆಯೇ ಉಳಿದು ಗುಲ್ಮದಲ್ಲಿ ಶೇಖರವಾಗುತ್ತದೆ. ಜಠರದ ಅಭಿಧಮನಿಗಳಲ್ಲೂ ರಕ್ತ ಹರಿದುಹೋಗುವುದಕ್ಕೆ ಅಡ್ಡಿ ತೋರಿಬಂದು ಅವುಗಳಲ್ಲಿ ರಕ್ತದ ಸಂಗ್ರಹವಾಗುತ್ತದೆ. ಮತ್ತು ರಕ್ತದ ಒತ್ತಡ ಏರಿ ಅಭಿಧಮನಿಯ ಉಪವಾಹಿನಿಗಳು ಛಿದ್ರಿಸಿ ರಕ್ತಸ್ರಾವವಾಗಬಹುದು. ಈ ರಕ್ತ ಸ್ರಾವದಿಂದ ಬ್ಯಾಂಟಿರೋಗದ ಒಂದು ಪ್ರಮುಖ ಲಕ್ಷಣವಾದ ರಕ್ತಕಣಕೊರತೆ ಮತ್ತು ಶ್ವೇತಕಣ ಕೊರತೆ ಕಂಡುಬರಬಹುದು. ರಕ್ತ ಸಂಗ್ರಹದಿಂದ ಗುಲ್ಮದ ಕಾರ್ಯಾಚರಣೆಗೆ ಧಕ್ಕೆಬಂದು ಶ್ವೇತಕಣಗಳ ತಯಾರಿಕೆ ಸ್ಥಗಿತವಾಗಿ ರೋಗದ ಶ್ವೇತಕಣಕೊರತೆ ಉದ್ಭವಿಸಬಹುದು. ಬಹುಶಃ ರಕ್ತಕಣಕೊರತೆ ರಕ್ತ ಸ್ರಾವ ಮಾತ್ರವಲ್ಲದೆ ಗುಲ್ಮದಲ್ಲಿ ಅದರ ನಾಶ ಹೆಚ್ಚುವುದರಿಂದ ಕೂಡ ಉಂಟಾಗುತ್ತದೆ. ಅಂತೂ ಯಾವ ಲಕ್ಷಣಕ್ಕೂ ಖಚಿತವಾಗಿ ಇಂಥ ಒಂದೇ ಅಥವಾ ಬೇರೆ ಬೇರೆ ಸಮಕಾಲಿಕವಾದ ಕಾರಣಗಳು ಎಂದು ಹೇಳಿ ಬ್ಯಾಂಟಿ ರೋಗವನ್ನು ವಿವರಿಸುವಂತಿಲ್ಲ.

	ಎಪ್ಪಿಂಗರ್ ಸೂಚಿಸಿರುವಂತೆ ಇಂಥ ಲಕ್ಷಣಗಳಿರುವ ರೋಗಗಳಿಗೆ ಯಕೃತ್ತು ಗುಲ್ಮಗಳ ತಂತುಕೀಕರಣ (ಹೆಪಾಟೋಸ್ಪೆನಿಕ್ ಫೈಬ್ರೋಸಿಸ್) ಎಂದು ಕರೆಯುವುದು ಬಹುಶಃ ಯುಕ್ತವೆನಿಸುತ್ತದೆ. ತಂತುಕೀಕರಣ ಯಕೃತ್ತಿನಲ್ಲಿ ಪ್ರಧಾನವಾಗಿದ್ದರೆ ಅದಕ್ಕೆ ಸಿರ್ಹೋಸಿಸ್ ಎಂದೂ ಗುಲ್ಮದ ಲಕ್ಷಣ ಪ್ರಧಾನವಾಗಿದ್ದರೆ ಅದಕ್ಕೆ ಸ್ಪ್ಲೆನಿಕ್ ಅನೀಮಿಯ ಎಂದೂ ಗುರುತಿಸಬಹುದು, ಆದರೆ ಸ್ಪ್ಲೆನಿಕ್ ಅನೀಮಿಯ ಎಂದು ಸಾಮಾನ್ಯವಾಗಿ ವ್ಯವಹರಿಸುವ ರೋಗದಲ್ಲಿ ಯಕೃತ್ತಿನ ತಂತುಕೀಕರಣ ಕಂಡುಬರುವುದು ಅಸಾಮಾನ್ಯ.   (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ